Friday, November 27, 2009

ಮಸೀದಿ ಒಡೆದಿದ್ದಕ್ಕೆ ಯಾವ ಶಿಕ್ಷೆ?

ಅಯೋಧ್ಯೆ, ಅಯೋಧ್ಯೆ ಎಂಬೊಂದು ಊರು. ಅಲ್ಲಿ ಶ್ರೀರಾಮ, ಶ್ರೀರಾಮ ಎಂಬ ರಾಜನಾಳಿದ್ದ... ಹೀಗೊಂದು ಕತೆ.
ರಾಮನನ್ನು ದೇವರೆಂದು ನಂಬಿ, ವಿಗ್ರಹ ಪ್ರತಿಷ್ಠಾಪಿಸಿ ಛತ್ರ, ಚಾಮರ, ವ್ಯಜನ, ಪರ್ಯಂಕಾದಿ ಷೋಡಶೋಪಚಾರ ಪೂಜಾ ಕೇಳಿಯಿಂದ ಕೃತಕೃತ್ಯರದೆವೆಂದುಕೊಳ್ಳುತ್ತಿದ್ದ ಕಾಫಿರ ಜನರ ಸೊಲ್ಲಡಗಿಸಿದ ಕೀರ್ತಿಸ್ತಂಭವಾಗಿ, ಬಾಬರನೆಂದ ಮುಸಲ್ಮಾನ್ ದೊರೆ ಅಲ್ಲೊಂದು ಮಸೀದಿ ಕಟ್ಟಿಸಿದ. ಕ್ಷತ್ರಿಯ, ರಜಪುತರಾದಿ ಹಿಂದೂ ಯೋಧರು ಅಗೇನೂ ಕಿಸಿಯಲಾಗಲಿಲ್ಲ. ಉನ್ನತ ರಣತಂತ್ರಕ್ಕೋ, ಬಾಬರನ ಪ್ರಶ್ನಾತೀತ ನಾಯಕತ್ವಕ್ಕೋ ಮೊಘಲ್ ಯೋಧರ ಅದಮ್ಯ ರಣೋತ್ಸಾಹಕ್ಕೋ, ಅಂತೂ ಇವರು ಮೊದಲೇ ಮಣಿದು ಹಿಮ್ಮೆಟ್ಟಿದ್ದರಲ್ಲಾ. ಇದು ಇತಿಹಾಸ.
ಗಾಢ ನಂಬಿಕೆಯ ಸಾಧು-ಸಂತರೂ, ಆಸ್ತಿಕ ಮಹನೀಯರೂ ಇದಕ್ಕಾಗಿ ಶತಮಾನಗಳಿಂದ ಮರುಗಿ ಸಂಕಟಪಟ್ಟಿದ್ದು ಸುಳ್ಲಲ್ಲ. ಆ ಸಂಕಟವನ್ನೇ ಬಂಡವಾಳಮಾಡಿಕೊಂಡು, ಹಿಂದೂ ಜಾಗೃತಿ ಹೆಸರಿನಲ್ಲಿ, ಸಭ್ಯ-ಸಾತ್ವಿಕರಲ್ಲಿ ಕ್ಷಾತ್ರ ಅಸೂಯೆ ಸೇಡುಗಳನ್ನು ತುಂಬಿ, ಆ ಬಲವನ್ನು ಒಗ್ಗೂಡಿಸಿದ್ದೂ, ಅದನ್ನು ಈ ಸಂದರ್ಭದ ಮಟ್ಟಿಗೆ ಅಮಾಯಕರು ಎನ್ನಬಹುದಾದ ಸಮುದಾಯದಮೇಲೆ ಎತ್ತಿಕಟ್ಟಿದ್ದೂ ರಾಜಕೀಯ. ಅದೂ ಕೈಲಾಗದವರ ಹೇಡಿ ರಾಜಕೀಯ!
ಅಲ್ಪಸಂಖ್ಯಾತರ ರಕ್ಷಣೆ ಎಂಬ ಕುಂಟುನೆಪದಲ್ಲಿ ನಡೆಯುತ್ತಿದ್ದ ಒಲೈಕೆ ರಾಜಕಾರಣಕ್ಕೆ ಬುದ್ಧಿ ಕಲಿಸಲು ಬಹುಸಂಖ್ಯಾತರನ್ನು ಒಗ್ಗೂಡಿಸುವ ಆವಶ್ಯಕತೆಯಿದ್ದದ್ದು ನಿಜ. ಅದು ನೇರವಾಗಿ, ಸತ್ಯ ಪ್ರಚಾರದ ಮೂಲಕ, ಸಮುದಾಯ ಶಿಕ್ಷಣದ ಮೂಲಕ ಆಗಬೇಕಾಗಿದ್ದ ಕೆಲಸ. ಅದಕ್ಕಾಗಿ ಸಂಘಟನೆಗಳು ಕಾರ್ಯನಿರತವಾಗಿದ್ದವು ಕೂಡ. ವೋಟಿನ ಹಸಿವಿನ ರಾಜಕಾರಣಿಗಳು, ದಿಢೀರ‍್ ಗೆಲವಿಗಾಗಿ ಅವುಗಳನ್ನೂ ಬುಟ್ಟಿಗೆ ಹಾಕಿಕೊಂಡರು; ಆ Infrastructure ಮೂಲಕ ಸಭ್ಯರ ಶತಮನಗಳ ಸಂಕಟವನ್ನು ಉರುಬಿ, ಕೆರಳಿಸಿ, ಸರಿಯಾಗಿ ಉಪಯೋಗಿಸಿಕೊಂಡರು! ರಾಮ, ಅವರ ಪಾಲಿಗೆ, ಅಮಿತಬ್ ಬಚ್ಚನ್‌ ಮಹೇಂದರ‍್ ಧೋಣಿ, ಐಶ್ವರ್ಯರನ್ನೂ ಮೀರಿಸಿದ, ಜಾಹಿರಾತಿನ “ಸೂಪರ‍್ ಸ್ಟಾರ‍್” ಆಗಿಬಿಟ್ಟ! ಹುಚ್ಚುತ್ಸಾಹದ ಜನರಿಂದ ಐತಿಹಾಸಿಕ ಸ್ಮಾರಕವನ್ನು ಕೆಡವಿಸಿಬಿಟ್ಟರು; ತಕ್ಷಣದ ಫಲವನ್ನೂ ಅನುಭವಿಸಿದರು. ಆನಂತರದ ಚುನಾವಣೆಗಳಲ್ಲಿ ಮೂಲೆಗುಂಪೂ ಆಗಿಬಿಟ್ಟರು.
ಊರು ಕೊಳ್ಳೆ ಹೋದಮೇಲೆ ದಿಡ್ಡಿ ಬಾಗಿಲು ಹಾಕಿದಂತೆ, ಈಗ ಪ್ರಕರಣದ ನ್ಯಾಯಾಂಗ ವರದಿ ಬಂದಿದೆ. ಮಸೀದಿ ಒಡೆಸಿದವರೆ ಉಗ್ರಾತಿ ಉಗ್ರ ಶಿಕ್ಷೆಯಾಗಬೇಕೆಂದು ಒಂದು ವರ್ಗದ ಜನ ಅಬ್ಬರಿಸುತ್ತಿದ್ದಾರೆ. ಮಾಡಿದ ತಪ್ಪಿಗೆ ಶಿಕ್ಷೆಯಾಗಬೇಕು, ಆಗಲಿ! ಆದರೆ ನಮಗೆ, ಸಮಾಜಕ್ಕೆ ಅಗಿರುವ ಹಾನಿಗೆ ಇದು ಪರಿಹಾರವೇ? “ಕೆರೆ ಒಡೆದವನಿಂದ ಕಂಬಳಿ ಕಿತ್ತುಕೊಂಡಂತೆ”!
ಕೆಡವಿದ ಜಾಗದಲ್ಲಿದ್ದ ಕಟ್ಟಡ, ಮಂದಿರವೋ, ಮಸೀದಿಯೋ ಎನ್ನುವುದನ್ನು ಇನ್ನೂ ತಜ್ಞರು ನಿರ್ದರಿಸಬೇಕಾಗಿದೆ ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರಂತೆ. ಅಂದರೆ ವಿಷಯ ಇನ್ನೂ ಮುಗಿದಿಲ್ಲ! ನ್ಯಾಯಾಂಗ, ಕಾನೂನು-ಕಟ್ಟಳೆಗಳ ದೃಷ್ಟಿ ಇದು. ಯವುದೂ ಕೂಲಂಕಶವಾಗಿ ನಡೆಯಬೇಕೆಂದು ಅದು ಬಯಸುವುದು ತಪ್ಪಲ್ಲ. ಆದರೆ ನಮ್ಮ ಜೀವನದ ದಿನನಿತ್ಯದ ಒಂದೊಂದು ಹೆಜ್ಜೆಯೂ ಪ್ರಜ್ಞಾಪೂರ್ವಕವಾಗಿ, ಕಾಯ್ದೆ-ಕಟ್ಟಳೆಗಳ ಅನುಮೋದನೆಯಿಂದಲೇ ನಡೆಯುವುದಿಲ್ಲ; ನಾವು ಬಹುತೇಕ Commonsense ಎನ್ನುವುದನ್ನೂ ಉಪಯೋಗಿಸುತ್ತೇವೆ! ಬುದ್ಧಿ ತಿಳಿಯಾಗಿಟ್ಟುಕೊಂಡು ನೋಡಿ, ಶ್ರೀರಾಮಚಂದ್ರನ ಕಾಲದ ಮಡಕೆ-ಕುಡಿಕೆಗಳು, ಬುರುಡೆಚೂರುಗಳೂ,ಡಕ್ಟರೇಟ್ ಪ್ರಬಂಧ ಬರೆಯುವ ಪುರಾತತ್ತ್ವಶಾಸ್ತ್ರದ ವಿದ್ಯಾರ್ಥಿಗೆ ವಿಷಯವಾಗಬಹುದೇ ಹೊರತು ಅದು ಚುನಾವಣಾ ರಾಜಕೀಯದ ವೋಟಿನ ವಿಷಯವಾಗುವುದನ್ನೂ ನಾವು ಆವೇಶದಿಂದ ಒಪ್ಪಿಕೊಳ್ಳುತ್ತೇವಲ್ಲಾ, ತಪ್ಪು ಯಾರದು?!
ಸೋಂಬೇರಿ ರಾಜಕರಣಿಗಳು ಕಾಯ್ದೆ-ಕಾನೂನೆಂಬ ಸುದೀರ್ಘ ಹಗ್ಗ-ಕಗ್ಗಗಳನ್ನೂ, ಸತ್ಯವನ್ನು ನೇಣು ಹಾಕುವ ಕುಣಿಕೆಯಾಗಿಯೇ ಉಪಯೋಗಿಸಿಕೊಳ್ಳುತ್ತಾರೆ; ಆದರೆ ‘ಕಾಮನ್‌ಸೆನ್ಸಿಗ’ರಾದರೂ ಸತ್ತ ಕತ್ತೆಯನ್ನು ಬಡೆಯಹೋಗದೆ, ಇಂದಿನ ನಯವಂಚಕರು , ಅಂದಿನಂತೆಯೇ ಉರುಬುತ್ತಿರುವ ಮಂಕುಬೂದಿಯಿಂದ ಅಪ್ಪಾವಿಗಳನ್ನು ರಕ್ಷಿಸುದೊಳ್ಳೆಯದಲ್ಲವೇ?
ಆರ್. ಕೆ ದಿವಾಕರ